ಚೋಖಾಮೇಳ

ಪಂಢರಪುರದ ವಿಟ್ಠಲನ ಪರಮಭಕ್ತ. ಜಾತಿಯಲ್ಲಿ ಅಸ್ಪøಶ್ಯ. ಈತ ಹದಿಮೂರನೆಯ ಶತಮಾನದ ಕೊನೆಗೆ ಹಾಗೂ ಹದಿನಾಲ್ಕನೆಯ ಶತಮಾನದ ಆರಂಭದಲ್ಲಿ ಮಂಗಳವೀಡಿನಲ್ಲಿದ್ದವ. ಯಾತ್ರಾರ್ಥಿಗಳಾದ ಜ್ಞಾನದೇವ ಮತ್ತು ನಾಮದೇವರ ಗುಂಪಿನಲ್ಲಿ ಈತನೂ ಇರುತ್ತಿದ್ದ.

ಈತ ಯಾವಾಗಲೂ ವಿಟ್ಠಲ ದೇವಾಲಯದ ಹೊರಗಡೆ ಇದ್ದು ಆತನನ್ನು ಭಜಿಸುತ್ತಿದ್ದ. ಮಂಗಳವೀಡಿನ ಕೋಟೆಯನ್ನು ಕಟ್ಟುವಾಗ ಗೋಡೆ ಕುಸಿದುದರಿಂದ ಅದರಡಿ ಸಿಕ್ಕಿ ಮರಣ ಹೊಂದಿದ (1338). ನಾಮದೇವನ ಸಲಹೆಯಂತೆ ವಿಟ್ಠಲನ ಭಕ್ತರು ಈತನ ಎಲುಬುಗಳಲ್ಲಿರುವ ವಿಟ್ಠಲನಾಮಸ್ಮರಣೆಯನ್ನು ಗುರುತಿಸಿ, ಅವನ್ನು ಪಂಢರಪುರಕ್ಕೆ ತಂದು ಅಲ್ಲಿನ ವಿಟ್ಠಲ ಗುಡಿಯ ಮಹಾದ್ವಾರದ ಎದುರಿಗೆ ಸಮಾಧಿ ಮಾಡಿದರು.

ಈತ ಕೆಲವು ಅಭಂಗಗಳನ್ನು ರಚಿಸಿದ್ದಾನೆ. ಅವುಗಳಲ್ಲಿ, ಹೀನ ಕುಲದವನಾದ ತನ್ನ ಭಕ್ತಿಯನ್ನು ದೇವರು ಸ್ವೀಕರಿಸುವನೆ, ಎಂದು ಕೊರಗಿದ್ದಾನೆ. ಇನ್ನೊಂದು ಅಭಂಗದಲ್ಲಿ ತಾನು ಹೊಲೆಯವನಾದ ಮಾತ್ರಕ್ಕೆ ತನ್ನ ಹೃದಯ ಹೊಲೆಯೆ-ಎಂದು ಕೇಳಿದ್ದಾನೆ. ಈತನಿಗೆ ದೇಹವೇ ಪಂಢರಪುರ, ಆತ್ಮನೇ ವಿಟ್ಠಲ, ಶಾಂತಿಯೇ ರುಕ್ಷಿಣಿ. ಇದೇ ಇತನ ಧ್ಯಾನದ ವಿಧಾನ. ವಿಟ್ಠಲನ ನಾಮವನ್ನು ನೆನೆವಾಗ ಚಿಂತೆ ಬೇಡ, ಅಂಜಿಕೆ ಬೇಡ; ದುರುಳರೆಲ್ಲ ಇಲ್ಲಿ ಬಂದು ಪಾವನರಾಗಬೇಕು-ಇದು ಈತನ ಸಂದೇಶ. ವಿಟ್ಠಲ ನಮ್ಮ ಮನೆಗೆ ಬಂದಾಗ ಪಂಚಪ್ರಾಣದ ಆರತಿಯನ್ನು ಎತ್ತಿದೆ. ಷಡ್‍ರಸದ ಪಕ್ವಾನ್ನವ ನೀಡಿದೆ. ಅವನಿಗೆ ತಕ್ಕ ಅನ್ನ ನಮ್ಮಲ್ಲಿರದಿದ್ದರೂ ಅದನ್ನವನು ಸವಿ ನೋಡಿದ-ಎಂಬುದು ಈತನ ಶ್ರದ್ಧೆ.
(ಎಂ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ